ಜಯಮಾಲ
	(1959- ). ವಾಣಿಜ್ಯ ಚಿತ್ರಗಳಲ್ಲದೆ, ಹೊಸ ಅಲೆಯ ಕನ್ನಡ ಚಿತ್ರಗಳಲ್ಲೂ ತನ್ನ ಅಭಿನಯ ಕೌಶಲವನ್ನೂ ಅಭಿವ್ಯಕ್ತಿಗೊಳಿಸಿದ ಅಭಿನೇತ್ರಿ, ಬಹುಭಾಷಾ ತಾರೆ, ಅಭಿನಯಕ್ಕಾಗಿ ರಾಜ್ಯ, ರಾಷ್ಟ್ರಪ್ರಶಸ್ತಿ ಪುರಸ್ಕøತೆ, ನಿರ್ಮಾಪಕಿ — ಜಯಮಾಲ. ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪಾಣೆ ಮಂಗಳೂರಿನಲ್ಲಿ 1959ರ ಫೆಬ್ರುವರಿ 2ರಂದು. ತಂದೆ ಜಿ. ಓಮಯ್ಯ, ತಾಯಿ ಕಲಮಲಮ್ಮ, ರಾಜ್ಯಶಾಸ್ತ್ರದಲ್ಲಿ ಪದವೀಧರೆ. ಪ್ರದರ್ಶನ ಕಲೆಯಲ್ಲಿ ಆಸಕ್ತಿ. ಕಾಸ್‍ದಾಯಿ ಕಂಡನೆ (1973) ತುಳು ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಲನಚಿತ್ರರಂಗ ಪ್ರವೇಶ. ಹದಿಮೂರು ವರ್ಷದ ಈ ತಾರೆಗೆ ನವಭಾರತ ಪತ್ರಿಕೆಯ ಪ್ರಶಸ್ತಿ. ಸುಮಾರು 65 ಕನ್ನಡ ಚಿತ್ರಗಳಲ್ಲಿ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಜ್‍ಕುಮಾರ ಅವರ ಜೊತೆ ಏಳು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ, ತುಳು, ಭಾಷಾಚಿತ್ರಗಳಲ್ಲದೆ ತೆಲಗು, ತಮಿಳು, ಮಲೆಯಾಳಂ ಭಾಷಾಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಜಯಮಾಲ ಚಿತ್ರ ನಿರ್ಮಾಣಕ್ಕೂ ತೊಡಗಿದರು. ಅಗ್ನಿಪರೀಕ್ಷೆ (1986) ಜಯಮಾಲ ನಿರ್ಮಿಸಿದ ಮೊದಲ ಚಿತ್ರ. ತಾಯಿ ಸಾಹೇಬ, ಚಿತ್ರದಲ್ಲಿ. ಇದು ಜಯಮಾಲ ಅವರ ನಿರ್ಮಾಣದ ನಾಲ್ಕನೆಯ ಚಿತ್ರ. ಗೀರೀಶ್ ಕಾಸರವಳ್ಳಿಯವರ ನಿರ್ದೇಶದ ಈ ಚಿತ್ರಕ್ಕೆ ಕೇಂದ್ರ ಸರಕಾರದ 1997ನೇ ಸಾಲಿನ ಸ್ವರ್ಣಕಮಲ  ಪ್ರಶಸ್ತಿ ದೊರೆತಿದೆ. ಅಭಿಯಕ್ಕಾಗಿ ಜಯಮಾಲ ಅವರಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಲಭ್ಯವಾಯಿತು. 

ತಾಯಿ ಸಾಹೇಬ 1997-98ನೆ ಸಾಲಿನ ಅತ್ಯುತ್ತಮ ಚಿತ್ರವಾಗಿ ರಾಜ್ಯ ಸರಕಾರದಿಂದಲೂ ಪುರಸ್ಕøತವಾಯಿತು. ಅತ್ಯುತ್ತಮ ನಟಿಯಾಗಿ ಜಯಮಾಲ. ಅತ್ಯುತ್ತಮ ಪೋಷಕ ನಟಿರಾಗಿ ಎಸ್ ಶಿವರಾಮ್, ಅತ್ಯುತ್ತಮ ಕಥಾ ಲೇಖಕರಾಗಿ ಆರ್.ಎಸ್.ಲೋಕಾಪುರ (ರಂ.ಶಾ), ಅತ್ಯುತ್ತಮ ಛಾಯಾಗ್ರಹಕರಾಗಿ ಎಚ್.ಎಂ.ರಾಮಚಂದ್ರ ಮತ್ತು ಅತ್ಯುತ್ತಮ ಕಲಾ ನಿರ್ದೇಶಕರಾಗಿ ರಮೇಶ ದೇಸಾಯಿ ಪುರಸ್ಕøತರಾದರು. ತುತ್ತೂರಿ (2004) ಪನೋರಮಾಕ್ಕೆ ಆಯ್ಕೆಯಾದ ಚಿತ್ರ. ಜಯಮಾಲ ಗಂಗವ್ವ, ಗಂಗಾಮಾಯಿ, ಖಂಡವಿದೆಕೊ ಮಾಂಸವಿದೆಕೊ ಸಂಗೀತ ಮೊದಲಾದ ಹೊಸ ಅಲೆಯ ಚಿತ್ರಗಳಲ್ಲಿ, ಅಭಿನಯಿಸಿದ್ದಾರೆ. ಚಿತ್ರದಲ್ಲಿ ಪಾತ್ರದಲ್ಲಿನ ಅವಶ್ಯಕತೆ ಮನಗಂಡು ಮುಕ್ತ ಮನಸ್ಸಿನಿಂದ ಅಭಿನಯಿಸುವ ಗುಣ ಇವರದು. ಅಂತ ಚಿತ್ರದಲ್ಲಿನ ಅಂಬರೀಷರೊಂದಿಗೆ ಹಸಿಬಿಸಿಯಾಗಿ ಅಭಿನಯಿಸಿದ ಜಯಮಾಲರವರ ಅಭಿನಯದ ಇನ್ನೊಂದು ಪ್ರಬುದ್ಧ ಮುಖವನ್ನು ತೆರೆದಿಟ್ಟದ್ದು ತಾಯಿ ಸಾಹೇಬ.

`ಕನ್ನಡ ಚಿತ್ರೋದ್ಯಮದ ಒಳಹೊರಗನ್ನೆಲ್ಲಾ ಆಳವಾಗಿ ಅರಿತಿರುವ ಜಯಮಾಲಾ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಯಲ್ಲಿ ವಿವಿಧ ಪದಾಧಿಕಾರಿಗಳಾಗಿ ಸಕ್ರಿಯವಾಗಿ ದುಡಿದವರು. ವಾಣಿಜ್ಯಮಂಡಳಿಯ ಕಾರ್ಯಕಾರಿಯನ್ನು ಪ್ರವೇಶಿಸಿದ ಮೊದಲ ಮಹಿಳೆ. ಖಜಾಂಚಿಯಾಗಿ, ಕಾರ್ಯದರ್ಶಿಯಾಗಿ ಕೆಲಸಮಾಡಿದರು. ಸಮಾಜ ಸೇವೆ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿಯೂ ಜಯಮಾಲಾ ಆಸಕ್ತಿಯಿಂದ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಬೀದಿ ಮಹಿಳೆಯರಿಗೆ ಆಶ್ರಯ ನೀಡಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಪ್ರಯತ್ನಿಸುತ್ತಿರುವ ಮೈಸೂರಿನ ಶಕ್ತಿಧಾಮ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿಯಾಗಿ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 			(ಶ್ರೀಕೃಪಾ)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ